ಮನ್ರೋ, ಮರಿಲಿನ್
1926-62. ಅಮೆರಿಕದ ಚಲನಚಿತ್ರ ನಟಿ. ತನ್ನ ಅಪಾರ ಸೌಂದರ್ಯದಿಂದಾಗಿ ಪ್ರಪಂಚ ಖ್ಯಾತಿಯ ಲೈಂಗಿಕ ಪ್ರತೀಕವಾದಳು. ಚಲನಚಿತ್ರ ಕ್ಷೇತ್ರದಲ್ಲಿ ಯಶಸ್ಸು ಪಡೆದರೂ ಕಡೆಗೆ ಇವಳ ಜೀವನ ದುರಂತಮಯವಾಯಿತು. ನಿದ್ದೆ ಗುಳಿಗೆಗಳ ಅತಿಸೇವನೆಯಿಂದ ಅಕಾಲ ಮೃತ್ಯುವನ್ನಪ್ಪಿದಳು.

ಮರ್ಲಿನ್ ಮನ್ರೋಳ ನಿಜನಾಮಧೇಯ ಜೀನ್ ಬೇಕರ್ ಅಥವಾ ನಾರ್ಮಜೀನ್ ಮಾರ್ಟಿನ್‍ಸನ್. ತನ್ನ ಶೈಶವವನ್ನು ಅನಾಥಾಲಯಗಳು ಮತ್ತು ಪೋಷಣಾಲಯಗಳಲ್ಲಿ ಕಳೆದಳು. ಛಾಯಾಚಿತ್ರಗ್ರಾಹಕರ ಮಾಡೆಲ್ ಆದಳು. 1948ರಲ್ಲಿ ಡೇಂಜರಸ್ ಇಯರ್ಸ್ ಮೂಲಕ ಚಿತ್ರರಂಗ ಪ್ರವೇಶಿಸಿದಳು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದು. ದಿ ಆಸ್ಟಾಲ್ಟ್ ಜಂಗಲ್ (1950) ಮತ್ತು ಆಲ್ ಎಬೌಟ್ ಈವ್ (1950) ಗಳಲ್ಲಿಯ ಪಾತ್ರಗಳಿಂದ ಮನ್ನಣೆ ಗಳಿಸಿದಳು. ಜಂಟ್ಲಮನ್ ಪ್ರಿಫರ್ ಬ್ಲಾಂಡ್ಸ್ (1953). ಹೌಟು ಮ್ಯಾರಿ ಎ ಮಿಲಿಯನೇರ್ (1953) ದಿ ಸೆವೆನ್ ಇಯರ್ ಇಚ್ (1955) ಮೊದಲಾದ ಹರ್ಷಾಂತ ಚಿತ್ರಗಳಲ್ಲಿ ಈಕೆಯ ಪಾತ್ರಗಳು ಲೈಂಗಿಕ ಪ್ರತೀಕವಾಗಿದ್ದವು. ತನ್ನ ನಟನಾ ಸಾಮಥ್ರ್ಯ ಹಾಗೂ ವೈಯಕ್ತಿಕ ಲಾವಣ್ಯಕ್ಕೆ ಮನ್ನಣೆಗಳಿಸುವ ಬಗ್ಗೆ ಕಾತರಳಾಗಿ ನ್ಯೂಯಾರ್ಕಿನ ಆಕ್ಟರ್ಸ್ ಸ್ಟುಡಿಯೋದಲ್ಲಿ ಲೀಸ್ಟಾಸ್‍ಬರ್ಗ್ ನೇತೃತ್ವದಲ್ಲಿ ಅಧ್ಯಯನ ನಡೆಸಿ, ಬಸ್‍ಸ್ಟಾಪ್ (1956) ದಿ ಪ್ರಿನ್ಸ್ ಅಂಡ್ ದಿ ಷೋ ಗರ್ಲ್ (ಲಾರೆನ್ಸ್ ಒಲಿವಿಯರ್ ನೊಡನೆ, 1957) ಸಮ್ ಲೈಕ್ ಇಟ್ ಹಾಟ್ (1959) ಮತ್ತು ಕೊನೆಯದಾಗಿ ದಿ ಮಿಸ್ ಫಿಟ್ಸ್ (1961) ಮೊದಲಾದ ಹೆಚ್ಚು ಗಂಭೀರವಾದ ಚಿತ್ರಗಳಲ್ಲಿ ಪಾತ್ರವಹಿಸಲು, ಹಾಲಿವುಡ್‍ಗೆ ಹಿಂದಿರುಗಿದಳು.

ಈಕೆ ಮೂರು ಸಲ ಮದುವೆಯಾದುದು ಜನಜನಿತವಾದ ವಿಷಯ. ಜೋ ಡಿಮ್ಯಾಗಿಯೋನ ಜೊತೆ (1954) ಮದುವೆಯಾಗಿ ಒಂಭತ್ತು ತಿಂಗಳ ಅನಂತರ ವಿಚ್ಚೇದನ ಪಡೆದಳು. ಮತ್ತು ಪುಲಿಟ್ಜರ್ ಪ್ರಶಸ್ತಿ ವಿಜೇತ ನಾಟಕಕಾರ ಆರ್ಥರ್ ಮಿಲ್ಲರ್‍ನೊಂದಿಗೆ ಮದುವೆಯಾಗಿ (1956) ಆರು ವರ್ಷಗಳ ಅನಂತರ ವಿಚ್ಛೇದನ ಪಡೆದಳು.
(ಎನ್.ಎಸ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ